ಬರ್ಟೋಲೇ, ಕ್ಲಾಡ್ ಲೂಯಿ
1748-1822, ಫ್ರಾನ್ಸಿನ ರಸಾಯನ ವಿಜ್ಞಾನಿ. ಜನನ 9-12-1748, ಮರಣ 6-11-1822. ವೈದ್ಯವಿಜ್ಞಾನದಲ್ಲಿ ಪದವಿಗಳಿಸಿ ಮುಂದೆ ವೈದ್ಯ ಮತ್ತು ರಸಾಯನ ವಿಜ್ಞಾನಗಳಲ್ಲಿ ಸಂಶೋಧನೆ ಮಾಡತೊಡಗಿದ. ಲವಾಸ್ಯೇ (1743-994) ಪ್ರತಿಪಾದಿಸಿದ ನೂತನ ಸಿದ್ಧಾಂತಗಳನ್ನು ಅಂಗೀಕರಿಸಿದ ಮೊದಲಿಗರ ಪೈಕಿ ಇವನೂ ಒಬ್ಬ. ರಾಸಾಯನಿಕ ಕ್ರಿಯೆಗಳು ಅವುಗಳಲ್ಲಿ ಭಾಗವಹಿಸುವ ವಸ್ತುಗಳ ದ್ರವ್ಯಪರಿಮಾಣಗಳನ್ನು ಅವಲಂಬಿಸಿರುತ್ತವೆ ಎಂದು ಹೇಳಿದ. ಇದೇ ಮುಂದೆ ರಾಶಿಕ್ರಿಯೆಯ ನಿಯಮಕ್ಕೆ (ಲಾ ಆಫ್ ಮಾಸ್ ಆಕ್ಷನ್) ಕಾರಣವಾಯಿತು. ಧಾತುಗಳು ಎಲ್ಲ ಪ್ರಮಾಣಗಳಲ್ಲೂ ಸಂಯೋಗವಾಗುತ್ತವೆ ಎಂದು ಈತ ತಪ್ಪಾಗಿ ತಿಳಿದಿದ್ದ. ಇದರ ಬಗ್ಗೆ ಜೋಸೆಫ್ ಲೂಯಿ ಪ್ರೊಸ್ಟ್ (1754-1826) ಎಂಬಾತನ ಜೊತೆ ವಾಗ್ಯುದ್ಧ ಮಾಡಿದ. ಇದೇ ಮುಂದೆ ನಿಯತಾನುಪಾತ ನಿಯಮವನ್ನು ಸ್ಥಿರಪಡಿಸಲು ನೆರವಾಯಿತು.

	ಎಲ್ಲ ಆಮ್ಲಗಳಲ್ಲಿಯೂ ಆಕ್ಸಿಜನ್ ಇದ್ದೇ ಇರುತ್ತದೆ ಎಂದು ಲವಾಸ್ಯೇ ತಿಳಿಸಿದ. ಬರ್ಟೋಲೇ ಇದನ್ನು ಒಪ್ಪಲಿಲ್ಲ. ಕಾರ್ಲ್ ವಿಲ್‍ಹೆಲ್ಮ್ ಶೇಲೂ (1742-1986) ಎಂಬಾತ ಕ್ಲೋರಿನ್ ಮತ್ತು ಅದರ ಸಂಯುಕ್ತಗಳ ಮೇಲೆ ಮಾಡುತ್ತಿದ್ದ ಸಂಶೋಧನೆಯನ್ನು ಬರ್ಟೋಲೇ ಮುಂದುವರಿಸಿ ಚಲುವೆ ಮಾಡುವುದಕ್ಕೆ ಹೀಗೆ ಕ್ಲೋರಿನ್ ಮತ್ತು ಅದರ ಸಂಯುಕ್ತಗಳನ್ನು ಉಪಯೋಗಿಸಬಹುದೆಂದು ತಿಳಿಸಿದ. ಇದರ ಜೊತೆಯಲ್ಲಿಯೇ ಪ್ಯೂಸಿಕ್ ಆಮ್ಲದ ಯಾವ ಯಾವ ಘಟಕಗಳು ಎಷ್ಟೆಷ್ಟು ಪ್ರಮಾಣಗಳಲ್ಲಿವೆ ಎಂಬುದನ್ನು ಪತ್ತೆ ಮಾಡಿದ. ಅಮೊನಿಯಾ ಅನಿಲದ ಮೇಲೆ ಜೋಸೆಫ್ ಪ್ರೀಸ್ಟ್ಲಿ (1733-1804) ಮಾಡುತ್ತಿದ್ದ ಸಂಶೋಧನೆಯನ್ನು ಬರ್ಟೋಲೇ ಮುಂದುವರಿಸಿ ಅದರಲ್ಲಿ ನೈಟ್ರೊಜನ್ ಮತ್ತು ಹೈಡ್ರೊಜನ್ ಪರಮಾಣುಗಳು ಯಾವ ಪ್ರಮಾಣದಲ್ಲಿ ಸಂಯೋಗ ಹೊಂದಿವೆ ಎಂಬುದನ್ನು ತೋರಿಸಿದ. 1781ರಲ್ಲಿ ಆಕಾಡೆಮಿ ಆಫ್ ಸೈನ್ಸ ಸಿಗೆ ಬರ್ಟೋಲೇಯನ್ನು ಆಯ್ದರು. ಲವಾಸ್ಯೇ ಮತ್ತು ಇತರ ರಸಾಯನವಿಜ್ಞಾನಿಗಳ ಜೊತೆ ಈತ ಸೇರಿಕೊಂಡು 1787ರಲ್ಲಿ ಮೆತಡ್ಸ್ ಆಫ್ ಕೆಮಿಕಲ್ ನಾಮೆನ್‍ಕ್ಲೇಚರ್ ಎಂಬ ಪುಸ್ತಕವನ್ನು ಪ್ರಕಟಿಸಿದ.

	ಫ್ರಾನ್ಸಿನ ಕ್ರಾಂತಿ ಕಾಲದಲ್ಲಿ ಬರ್ಟೋಲೇ ವಿಜ್ಞಾನಕ್ಕೆ ಸಂಬಂಧಪಟ್ಟ ಅನೇಕ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ. 1792ರಲ್ಲಿ ನ್ಯಾಷನಲ್ ಮಿಂಟ್‍ನ ಪ್ರತಿನಿಧಿಯಾದ. 1794ರಲ್ಲಿ ಭೂವ್ಯವಸಾಯ ಇಲಾಖೆಯಲ್ಲಿ ಪ್ರತಿನಿಧಿಯಾದ. ಇದರ ಜೊತೆಯಲ್ಲಿಯೇ ಪಾಲಿಟೆಕ್ನಿಕಿನಲ್ಲಿ ಪ್ರಾಧ್ಯಾಪಕ ವೃತ್ತಿಯನ್ನು ಕೂಡ ನಿರ್ವಹಿಸುತ್ತಿದ್ದ. ಇವನ ಪರಿಶ್ರಮದಿಂದ ಅಕ್ಯಾಡೆಮಿ ಇನ್‍ಸ್ಟಿಟ್ಯೂಟ್ ನ್ಯಾಷನಲ್ ರೀತಿಯಲ್ಲಿ ಸಂಘಟನೆಯಾಯಿತು. (1795).
(ಆರ್.ಎಸ್.ಡಬ್ಲ್ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ